ಜರ್ಮನ್ ಛಂದಸ್ಸು -
ಹಳೆಯ ಜರ್ಮನ್ ಛಂದಸ್ಸು ಟ್ಯೂಟನ್ನರ ಛಂದಸ್ಸೇ ಆಗಿತ್ತು. ವೀರಕಾವ್ಯಕ್ಕೆ ಉಪಯೋಗಿಸುತ್ತಿದ್ದ ಪಂಕ್ತಿ ನಾಲ್ಕು ಸ್ವರಭಾರದ ಉಚ್ಚಾರಾಂಶದಿಂದಲೂ ಅನಿಯತ ಸಂಖ್ಯೆಯ ಭಾರರಹಿತ ಉಚ್ಚಾರಾಂಶದಿಂದಲೂ ಕೂಡಿ ಇಬ್ಭಾಗವಾಗಿ ಒಡೆದಿರುತ್ತಿತ್ತು. ಅಧ್ಯಕ್ಷರ ಪ್ರಾಸವೇ ಅದರ ಪ್ರಧಾನ ಲಕ್ಷಣ. ಆದರೆ ಆ ಬಗೆಯ ಕವಿತ್ವ ಬೇಗ ಬೇಗ ಹಲ ಕೆಲವು ವ್ಯತ್ಯಾಸಗಳಿಗೆ ಎಡೆಕೊಟ್ಟು ಮೂಲರೂಪದಿಂದ ಭಿನ್ನವಾಗುತ್ತ ಬಂತು. ಅಧ್ಯಕ್ಷರ ಪ್ರಾಸದ ಕಳೆತ, ಎರಡು ಅರ್ಧಪಂಕ್ತಿಗಳಿಗೆ ಅಂತ್ಯಪ್ರಾಸದಿಂದ ಜೋಡಣೆ, ಉದ್ದ ಪಂಕ್ತಿಗಳ ರಚನೆ, ಎರಡೆರಡು ಉದ್ದ ಪಂಕ್ತಿಗಳ ಕೂಡಿಕೆಯಿಂದಾದ ದ್ವಿಪದಿ-ಇವೆಲ್ಲ ತಲೆಯತ್ತಿದುವು. ಸ್ವರಭಾರವೊಂದೇ ಕಾವ್ಯ ಪಂಕ್ತಿಯ ಪಲ್ಲಟವಿಲ್ಲದ ಗುಣವಾಗಿತ್ತು. 10, 11ನೆಯ ಶತಮಾನದಲ್ಲಿ ಆಟೊ ಪೀಳಿಗೆಯ ಚಕ್ರವರ್ತಿಗಳು ಲ್ಯಾಟಿನ್ ಭಾಷೆಗೆ ಮನಸೋತರು. ಲ್ಯಾಟಿನ್ ಬಳಸಿದ ವೃತ್ತ ನಮೂನೆಗಳೂ ಗ್ರೀಕಿನಿಂದ ಲ್ಯಾಟಿನ್ ಎರವು ಪಡೆದು ತನ್ನದನ್ನಾಗಿಸಿಕೊಂಡಿದ್ದ ಆರು ಗಣಗಳ ಒಳಪ್ರಾಸ ಪಂಕ್ತಿಯೂ ಆಕರ್ಷಕವಾದುವು. ಜರ್ಮನ್ ಭಾಷೆಯ ಪದ್ಯಗಳಲ್ಲೂ ಅವಕ್ಕೆ ಪ್ರದೇಶ ಸಿಕ್ಕಿತು.

18ನೆಯ ಶತಮಾನದಲ್ಲಿ ಅದೇ ಆರು ಗಣಗಳ ಪಂಕ್ತಿ (ಡ್ಯಾಕ್ಟಿಲಿಕ್ ಹೆಕ್ಸಾ ಮೀಟರ್) ಜರ್ಮನ್ ವೀರಕಾವ್ಯ ಅಥವಾ ಮಹಾಕಾವ್ಯಕ್ಕೆ ಏಕವಾಹನವಾಯಿತು. ಕ್ಲಾಪ್‍ಸ್ಟಾಕ್ ಬಾಡ್ಮರ್ ವಾಸ್, ಗಯಟೆ ಮುಂತಾದವರೆಲ್ಲರೂ ಅದನ್ನು ಬಹಳ ಸ್ವಾತಂತ್ರ್ಯದಿಂದ ಉಪಯೋಗಿಸಿದರು. ಡ್ಯಾಕ್ಟಿಲ್ ಬದಲು ಸ್ಪಾಂಡಿ ಹೇರಳವಾಗಿ ಬರುತ್ತದೆ. ಬ್ರೋಕಿಗೂ ಜಾಗವುಂಟು. 2ನೆಯ ಮತ್ತು 4ನೆಯ ಸ್ವರಭಾರದ ಮೇಲೆ ಸತತವಾಗಿ ಹೆಚ್ಚು ಅವಧಾರಣೆ ಕಂಡುಬರುತ್ತದೆ. ಅನೇಕ ಕವಿಗಳಲ್ಲಿ ಒಂದೇ ಬಗೆಯ ಒತ್ತು ಇರುವುದರಿಂದ ಬೇಸರಿಕೆ ಅನಿವಾರ್ಯ. ಕೆಲವು ಕವಿಗಳಾದರೋ ಸ್ವರಭಾರದ ಮಟ್ಟವನ್ನು ಕಲಾತ್ಮಕವಾಗಿ ಏರಿಸಿ ಇಳಿಸಿ ವೈವಿಧ್ಯ ಪ್ರದರ್ಶಿಸಿದ್ದಾರೆ. ಗಯಟೆ ಇನ್ನೂ ಬೇರೆ ಬಗೆಯ ಪಂಕ್ತಿ ವೃತ್ತಗಳಿಗೆ ಸ್ವಾಮಿಯಾದ; 16ನೆಯ ಶತಮಾನದ ಹ್ಶಾನ್ಸ್ eóÁ್ಶಕ್ಸ್ ಬಳಕೆಗೆ ತಂದಿದ್ದ ಪ್ರಾಸಬದ್ಧ ದ್ವಿಪದಿಯನ್ನು ಪುನರುಜ್ಜೀವಿಸಿದ. ಅದರಲ್ಲಿ ಭಾರರಹಿತ ಉಚ್ಚಾರಾಂಶಕ್ಕೆ ಸ್ಥಳವಿದ್ದದ್ದರಿಂದ ಇಂಪೂ ಅಂದಚೆಂದವೂ ಹೆಚ್ಚಿದುವು. ಆ ದ್ವಿಪದಿಗೆ ನಿಟ್ವೆಲ್ವರ್ ಎಂದು ಹೆಸರು. ಇನ್ನೊಂದು ಮಾಡ್ರಿಗಾಲ್ವರ್. ಆ ವೃತ್ತದಲ್ಲಿ 2ರಿಂದ 6 ಗಣಗಳ ಪಂಕ್ತಿಗಳೂ ಕ್ಲುಪ್ತವಲ್ಲದ ಅಂತ್ಯಪ್ರಾಸವೂ ಸೇರಿ ಒಂದು ಬಗೆಯ ಸೊಬಗು ಏರ್ಪಟ್ಟಿದೆ. ಗಯಟೆ ನಾನಾ ಬಗೆಯ ಲಯಬದ್ಧ ಗುಚ್ಛಗಳನ್ನು ವಿರಚಿಸಿದ. ಗ್ರೀಕ್ ಪ್ರಗಾಥದ ಮಾದರಿಯನ್ನು ಹಲವರು ಅನುಸರಿಸಿದರು. ಹಲ್ಡರ್‍ಲಿನ್ ಮತ್ತು ಪ್ಲಾಟನ್ ಅದಕ್ಕೆ ಹೆಸರಾಂತವರಾದರು. ರುಕ್ಕರ್ಟ್ ಮತ್ತು ಪ್ಲಾಟನ್ ಪರ್ಷಿಯದ ಶಿಷ್ಟ ವೃತ್ತವಾದ ಗಜûಲ್ ಬಗೆಯ ಪದ್ಯಗಳನ್ನು ಬರೆದರು.

19ನೆಯ ಶತಮಾನದಲ್ಲಿ ಎರಡು ಛಂದೋವಿಧಾನಗಳಿಗೇ ಹೆಚ್ಚು ಪ್ರಾಬಲ್ಯವಿತ್ತು. ಎರಡು ಉಚ್ಚಾರಾಂಶ ಗಣದಿಂದಾದ ಒಂದೇ ತರದ ಪಂಕ್ತಿಗಳ ಜೋಡಣೆಯ ಗಂಭೀರ ವೃತ್ತ-ಒಂದು. ಒಂದು ಬಗೆಯ ರಾಗವಾಚನಕ್ಕೆ ಅದು ಯುಕ್ತ. ಇನ್ನೊಂದು, ಆಡುಮಾತಿನ ಲಯಗಳಿಂದ ಎದ್ದುಬಂದು, ಸ್ವರಭಾರದ ವೈವಿಧ್ಯ ಮತ್ತು ಎರಡೂ ಮೂರೂ ಉಚ್ಚಾರಾಂಶದ ಗಣಗಳ ಮಿಶ್ರಣಗಳಿಂದ ಕೊಂಚ ಲಘುವಾದರೂ ಹಿತವಾದ ಕವನ:

ಛಂದಶ್ಶಾಸ್ತ್ರದ ಮೀಮಾಂಸೆಯಲ್ಲಿ ಜರ್ಮನಿಗೆ ವಿಶೇಷ ಪ್ರಖ್ಯಾತಿ ಇದೆ.	(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ